ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು
🚩ಜೈ ಶಿವಾಜಿ 🚩
ಫೆಬ್ರುವರಿ 19 ಭಾರತೀಯ ಸಂಸ್ಕೃತಿಗಳ ಮಹಾನ್ ಆರಾಧಕ ಶಿವಾಜಿ ಮಹಾರಾಜರ ಜನ್ಮದಿನ. ಭಾರತದ ಸಾಂಸ್ಕೃತಿಕ ಪರಂಪರೆಗಳು ನಮ್ಮವರೇ ಆದ ರಾಜರ ಕ್ಷುಲ್ಲಕತನ ಮತ್ತು ಮೊಗಲರ ಅಂಧ ಮತಶ್ರದ್ಧೆಯಿಂದ ದುರಾಕ್ರಮಣಕ್ಕೊಳಗಾಗಿದ್ದಾಗ ಅದನ್ನು ಚತುರತೆಯಿಂದ ಎದುರಿಸಿ ಅದಕ್ಕೆ ಸೋಲುಣಿಸಿ, ಮುಂದಿನ ಜನಾಂಗಗಳು ಭಾರತೀಯ ಸಂಸ್ಕೃತಿಯ ಗಾಳಿಯ ಲೇಪನವನ್ನಾದರೂ ಸವಿಯುವಂತೆ ಉಳಿಸಿ ಹೋದವರು ಶಿವಾಜಿ ಮಹಾರಾಜರು.
ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕೆ ಶ್ರಮಿಸಿದ ಭಾರತ ಮಾತೆಯ ಮತ್ತೊಬ್ಬ ಮಹಾನ್ ಪುತ್ರರಾದ ಸ್ವಾಮಿ ವಿವೇಕಾನಂದರು ಶಿವಾಜಿಯ ಕುರಿತು ಆಡಿದ ಮಾತುಗಳನ್ನು ನಾವೊಮ್ಮೆ ಗಮನಿಸಬೇಕು. “ಶಿವಾಜಿಯಂತಹ ಪರಾಕ್ರಮಿ, ಧರ್ಮಪುರುಷನ ಬಗ್ಗೆ ಹಗುರ ಮಾತುಗಳನ್ನಾಡುವವರಿಗೆ ನಾಚಿಕೆಯಾಗಬೇಕು. ನಮ್ಮ ಜನಾಂಗ, ಧರ್ಮ ಮತ್ತು ಸಂಸ್ಕೃತಿ ಎಲ್ಲವೂ ವಿನಾಶದ ತುದಿ ತಲುಪಿರುವಾಗ, ನಮ್ಮ ಧರ್ಮವನ್ನು ಸಮಾಜವನ್ನು ಉದ್ಧಾರ ಮಾಡಿದವನು ಆತ. ವಾಸ್ತವವಾಗಿ ಇಂತಹ ಯುಗಪುರುಷನ ಬರುವಿಗೆ ಜನ ಕಾದು ಕುಳಿತಿದ್ದರು. ಸಾಧು ಸಂತರು ತಪಸ್ಸು ನಡೆಸಿದ್ದರು. ಅಂತಹ ಕಾಲಘಟ್ಟದಲ್ಲಿ ಅವತರಿಸಿ, ಅಧರ್ಮವನ್ನು ಅಳಿಸಿ, ಧರ್ಮವನುಳಿಸಿದ ಯುಗಪುರುಷನಾತ. ಪ್ರತ್ಯಕ್ಷ ಶಿವನ ಅವತಾರ. ನಮ್ಮೆಲ್ಲ ಗ್ರಂಥಗಳಲ್ಲಿ ವರ್ಣಿಸಲಾದ ಸರ್ವ ಸದ್ಗುಣಗಳ ಸಜೀವ ಆಕಾರ. ಅವನಷ್ಟು ಶ್ರೇಷ್ಠ ಶೂರ, ಸತ್ಪುರುಷ, ಭಗವದ್ಭಕ್ತ ರಾಜ ಇನ್ನೊಬ್ಬನುಂಟೇ? ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ ಅವನು. ಭಾರತದ ಭವಿತವ್ಯದ ಆಶಾದೀಪ ಅವನು”.
ಫೆಬ್ರುವರಿ 19, 1630 ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಹಾಜಿರಾಜ್ ಬೋಂಸ್ಲೆ ಮತ್ತು ಜೀಜಾಬಾಯಿ ದಂಪತಿಗಳ ಮಗನಾಗಿ ಶಿವಾಜಿ ಜನಿಸಿದರು. ಚಿಕ್ಕವಯಸ್ಸಿನಿಂದಲೇ ತಾಯಿಯಿಂದ ಪೌರಾಣಿಕ ಕಥೆಗಳನ್ನು ಕೇಳುತ್ತಾ ಬೆಳೆದ ಶಿವಾಜಿ ಅವರಿಗೆ ಅವರ ಜೀವನದ ಕೊನೆಯವರೆಗೂ ಹಿಂದೂ ಮತ್ತು ಸೂಫಿ ಮುನಿಗಳ ವಿಫುಲ ಸಂಪರ್ಕವಿತ್ತು. ಸಾಮ್ರಾಜ್ಯ ತನಗಾಗಿ ಅಲ್ಲ ಧರ್ಮಕ್ಕಾಗಿ ಎಂಬುದು ಶಿವಾಜಿಯ ಪ್ರತ್ಯಕ್ಷ ವ್ಯವಹಾರ. 16ರ ವಯಸ್ಸಿನಿಂದ ಆರಂಭಿಸಿ, ಅಕ್ಷರಶಃ ರಕ್ತವನ್ನೇ ಬೆವರಾಗಿ ಹರಿಸಿ ಕೋಟೆಗಳನ್ನು ಗೆದ್ದು ಸಾಮ್ರಾಜ್ಯ ಸ್ಥಾಪಿಸಿ, ಈ ಸಾಮ್ರಾಜ್ಯ ತನ್ನದಲ್ಲ, ನಿಮ್ಮದು ಎಂದು ಸಮರ್ಥ ರಾಮದಾಸರ ಭಿಕ್ಷಾಜೋಳಿಗೆಗೆ ಹಾಕಿದವರು ಶಿವಾಜಿ.
ಬಿಜಾಪುರದ ಆಫಜಲಖಾನನಿಗೆ ಸೋಲುಣಿಸಿ, ಔರಂಗಜೇಬನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ಮಾತ್ರವಲ್ಲದೆ ತನ್ನ ಸಾಮ್ರಾಜ್ಯದಲ್ಲಿ ವ್ಯವಸ್ಥಾತ್ಮಕವಾದ ಶ್ರೇಷ್ಠ ಆಡಳಿತ ನೀಡಿ, ಧರ್ಮ ಸಂರಕ್ಷಣೆಗೈದ ಶಿವಾಜಿ ನಮ್ಮ ಭಾರತೀಯರಿಗೆ ನಿತ್ಯ ಸ್ಮರಣೀಯರು.
ಸುಭಾಷರು ವಿದೇಶಕ್ಕೆ ಹಾರುವ ಮುನ್ನ ತಮ್ಮ ಮಿತ್ರ ವಿಜಯರತ್ನ ಮುಜುಮ್‌ದಾರರೊಡನೆ ಹೇಳಿದರಂತೆ “ಭಾರತದ ಸ್ವಾತಂತ್ರ್ಯ ಸಮರಕ್ಕೆ ಏಕಮಾತ್ರ ಆದರ್ಶವಾಗಿ ನಾವಿಂದು ಶಿವಾಜಿಯನ್ನು ಸ್ವೀಕರಿಸಬೇಕು”. ಈ ಮಾತು ಇಂದಿನ ಭಾರತಕ್ಕೂ ಅನ್ವಯ. ‘ನಮಗೆ ಶಿವಾಜಿ ಅಂತಹ ರಾಷ್ಟ್ರಭಕ್ತ, ಯುಕ್ತಿವಂತ, ಶ್ರೇಷ್ಠ ಆಡಳಿತಗಾರ, ಆಧ್ಯಾತ್ಮ ಜೀವಿ, ಮಾರ್ಗದರ್ಶಕ, ನಾಯಕ ಅತ್ಯಗತ್ಯವಾಗಿ ಬೇಕಾಗಿದ್ದಾರೆ.’